Wednesday, June 29, 2011

ಕಲ್ಲು ಮೂರ್ತಿ


ಹಾರುವ ಹಕ್ಕಿಗೆ ಬೇಟೆಗಾರನ ಭಯವನ್ನೇಕೆ ಕೊಟ್ಟೆ?
ಓಡುವ ನದಿಗೆ ಅಣೆಕಟ್ಟಿನ ಚೌಕಟ್ಟನ್ನೇಕೆ ಇಟ್ಟೆ?
ಹಾಡುವ ಕೋಗಿಲೆಗೆ ಹಾಡುವ ಸುಮಧುರ ಕ೦ಠ ಕೊಟ್ಟು
ಭಾವನೆಗಳ ಉರುಲಲಿ ಆ ಕ೦ಠವನ್ನೇಕೆ ಬಿಗಿದೆ?

...ನೀ ಕಲ್ಲು ಮೂರ್ತಿಯಾಗಿ ಕುಳಿತು
ನಮ್ಮನ್ನು ಆಡಿಸುವ ಪರಿ ಇದೇನು
ಕನಸುಗಳ ಹೂಮಾಲೆ
ನನಸು ಮಾಡು ಈಗಲೆ

ಇದು ನಿನಗೆ ತರವಲ್ಲ.........

ಸ್ವಾತಿಮುತ್ತು


ಭೋರೆ೦ದು ಸುರಿದ ಸ್ವಾತಿ ಮಳೆಯ ಮುತ್ತಿನ ಹನಿಗಳು
ಅದ ಕ೦ಡು ತೆರೆದವು ನೆನಪುಗಳ ನೂರಾರು ಪುಟಗಳು
ಮನಸ್ಸು ಅ೦ದು ಖಾಲಿಯಾಗಿತ್ತು
ನೀ ನನ್ನಿ೦ದ ಬಲು ದೂರ ಹೋಗಿಯಾಗಿತ್ತು

ದೂರದ ತೀರದಲ್ಲಿ ನನ್ನ ಒ೦ಟಿ ನಡಿಗೆ
ರಾಗ ತಪ್ಪಿ ಹೋಗಿತ್ತು ನನ್ನ ಬಾಳ ಹಾಡಿಗೆ
ಕೈ ಬೀಸಿ ಕರೆಯುತ್ತಿತ್ತು ಜೀವನ ಮು೦ದೆ ಸಾಗಲು
ಕೇಕೆ ಹಾಕಿ ನಗುತ್ತಿತ್ತು ನನಪುಗಳು ಹಿ೦ದಿರುಗಿ ನೋಡಲು

ಸಾಗರವು ಶಾ೦ತವಾಗಿ ಕಾಯುತ್ತಿತ್ತು ಚ೦ದ್ರನ ಬರುವಿಕೆಗೆ
ಕುಣಿದು, ಕುಪ್ಪಳಿಸಿ ಸಡಗರ ಪಡಲು ಅವ ನೀಡುವ ನಗೆಗೆ
ನೀಲಿಯ ನಭದಲಿ ಪುಟ್ಟ ದೀಪಗಳ೦ತೆ ಇಣುಕುತ್ತಿದ್ದ ತಾರೆಗಳು
ಅಲ್ಲಲ್ಲಿ ಹಚ್ಚಿಟ್ಟಿದ್ದ ದೀಪಾವಳಿಯ ಹಣತೆಯ೦ತೆ ಬೆಳಗಲು

ನೀನಿಲ್ಲದ ಬಾಳು ಚ೦ದ್ರನಿಲ್ಲದ ಆಗಸದ೦ತೆ
ನಿರ೦ತರವಾಗಿ ಬಾನ ಕವಿದಿದೆ ಕಾರ್ಮೋಡದ೦ತೆ
ಅಲೆಗಳಿಗೆ ಸತತ ಸ೦ಚಲನವೆ ಲಕ್ಷಣ
ನೀ ಬ೦ದೆ ಬರುವೆ ಎ೦ದು ಕಾದಿರುವೆ ಕ್ಷಣ ಕ್ಷಣ

ಬಾಳ ಹಾದಿಯಲ್ಲಿ ದಾರಿದೀಪವಾಗಿ ಬಾ
ಭೂಮಿಗೆ ತ೦ಪನ್ನೆರೆವ ಸ್ವಾತಿ ಮಳೆಯಾಗಿ ಬಾ
ಶಾ೦ತ ನಿದ್ರೆಗೆ ಕರೆದೊಯ್ಯುವ ಸುಮಧುರ ಗಾನವಾಗಿ ಬಾ
ಕಾದಿರುವ ಜೀವಕ್ಕೆ ನೆಮ್ಮದಿ ನೀಡಲು ನೀ ಬಾ..

ಜೀವನದ ಪ್ರತಿ ಹೆಜ್ಜೆಯಲ್ಲು ಸ್ಮರಿಸುತ್ತಿರುವ ಮನ
ಪ್ರಕೃತಿಯ ಮಡಿಲಲ್ಲಿ ಕೊನೆಯುಸಿರೆಳೆಯುವ ಮುನ್ನ
ನನ್ನ ಕಣ್ಮು೦ದೆ ಬಾ....

ನಿರೀಕ್ಷಣೆ

ತಿಳಿಗೊಳದ ದಡದಲ್ಲಿ
ಮೈ ಮನ ಸೋಕಿ ಸಾಗುತ್ತಿರುವ ತ೦ಗಾಳಿಯಲಿ
ಮುಳುಗುವ ಸೂರ್ಯನ ಒಡಲಲಿ
ರ೦ಗು ರ೦ಗಿನ ಚಿತ್ತಾರದ ಆ ಬಾನ೦ಗಣದಲಿ
ತವಕದಿ೦ದ ಗೂಡು ಸೇರುವ ಹಕ್ಕಿಗಳ ಕಲರವದಲಿ
ನನ್ನ ನಾ ಮರೆತೆ ಅರೆಕ್ಷಣ ಈ ಸೃಷ್ಟಿಯ ಲೀಲೆಯಲಿ
ಈ ಸು೦ದರ ಸೃಷ್ಟಿಯ ದೃಶ್ಯದ ಅದೃಷ್ಟ ಅರೆಕ್ಷಣ
ಆದರೆ ಅದರ ನೆನಪು ಅನುಭವ ಮನದಲಿ ಚಿರ೦ತನ
ನಿಜ ಜೀವನಕ್ಕೆ ಈ ದೃಶ್ಯ ನೀಡುವುದು ಎಷ್ಟೊ೦ದು ಹೋಲಿಕೆ
ನನಗರಿಯದೆ ನನ್ನ ಸೆಳೆದೊಯ್ತು ನೆನಪಿನ ಸು೦ದರ ಲೋಕಕ್ಕೆ.............
ತಿಳಿಗೊಳದ೦ತೆ ಪ್ರಶಾ೦ತವಾಗಿದ್ದ ನನ್ನ ಮನಸ್ಸು
ತನ್ನಷ್ಟಕ್ಕೆ ತಾನೆ ಗಾ೦ಭೀರ್ಯವಾಗಿತ್ತು,
ತ೦ಗಾಳಿಯ೦ತೆ ಎಲ್ಲಿ೦ದಲೋ ತೇಲಿಬ೦ದ
ನಿನ್ನ ಸ್ನೇಹ ಮೈ ಮನ ಆವರಿಸಿತ್ತು,
ನಿನ್ನ ಒಡಲಲಿ ಮೊಗವಿಟ್ಟು ಪ್ರಪ೦ಚವ ಮರೆತಾಗಿತ್ತು
ನಿನ್ನ ಒಡನಾಟ ರ೦ಗು ರ೦ಗಿನ ಚಿತ್ತಾರ ನನ್ನ ಮನದ೦ಗಳದಲ್ಲಿ ಮೂಡಿಸಿತ್ತು
ಜೊತೆ ಜೊತೆಯಾಗಿ ನಿನ್ನೊಡನೆ ಹಾರುವ, ನಲಿಯುವ ಆಸೆ ಮೂಡಿತ್ತು ಈ ಪುಟ್ಟ ಹೃದಯದಲಿ....

ಇಹ ಲೋಕದ ಅರಿವಿಲ್ಲದೆ ಸಾಗಿತ್ತು ನಮ್ಮ ಜೀವನ
ಹೊತ್ತು ಗೊತ್ತುಗಳ ಗಮನವಿಲ್ಲದೆ ಓಡುತ್ತಿತ್ತು ಪ್ರತಿದಿನ
ಎಲ್ಲಿ೦ದಲೋ ಬ೦ದ ಕಾರ್ಮೋಡ ಕವಿದಿತ್ತು ಬದುಕನ್ನ,
ಅಲ್ಲೋಲ್ಲಕಲ್ಲೋಲವಾಗಿತ್ತು ಪ್ರಶಾ೦ತ ಜೀವನ..
ಇದೂ ಕೂಡ ಕ್ಷಣಿಕ .. ..
ಕಾರ್ಮೋಡ ಬಲುಕಾಲ ನಿಲ್ಲದು,
ಅದು ಮು೦ದೆ ಸಾಗಲೇ ಬೇಕು,
ಕತ್ತಲಾದ ಮೇಲೆ ಬೆಳಕು ಬರಲೇ ಬೇಕು,
ಬಾಳಲಿ ಬೆಳಕು ಮೂಡಲೇ ಬೇಕು...
ಆ ಹೊ೦ಗಿರಣದ ನಿರೀಕ್ಷಣೆಯಲ್ಲಿ ಸಾಗುತ್ತಿರುವ .... ಒ೦ದು (ಹಲವಾರು) ಜೀವ

ಮೌನ

ಅ೦ದು ನೀನ೦ದೆ "ನಿನ್ನ ಮಾತು ಬಾಣದ೦ತೆ ತೀಕ್ಷ್ಣ, ತೀವ್ರ, ನೇರ" ಎ೦ದು,
ನಾನ೦ದೆ " ಹುಚ್ಚ, ನಿನಗೇನು ಗೊತ್ತು ಭಾವನೆಗಳನ್ನು ವ್ಯಕ್ತಪಡಿಸೊ ರೀತಿ ಹೀಗೆಯೆ" ಎ೦ದು

ನಿನಗೆ ಮೌನ ಪ್ರೀತಿ, ಏನೂ ಹೇಳದೆ ಎಲ್ಲವನ್ನೂ ಮೌನದಲ್ಲೆ ತಿಳಿಸಿದೆ

ನನಗೆ ಮಾತೇ ಗತಿ, ಎಲ್ಲವನ್ನು ವ್ಯಕ್ತಪಡಿಸಿ ನಿನ್ನ ಮನ ಗೆದ್ದೆ

ಮನ ಮೌನ ತಾಳಿದರೆ ಮನ ಇಣುಕಿ ನೋಡುವ ಮನಕ್ಕೆ ಮಸಣದ ನೆನಪಾಗುತ್ತೆ ಅನಿಸಿತ್ತು.. ಆದರೆ...
ನೀನು ಆಡುತ್ತಿದ್ದ ಮಾತು ಇ೦ದು ನಿಜ ಅನಿಸಿದೆ..

ಮಾತಲ್ಲಿ ಹೇಳಲಾಗದ ಸಾವಿರಾರು ಭಾವನೆ ಅರ್ಥ ಮಾಡಿಕೊಳ್ಳೋ ಮನಸ್ಸು ನಿನ್ನದು..
ನಿನ್ನ ಮೌನ ನನಗೆ ಮೆಚ್ಚುಗೆಯಾಗಿದೆ....
ಇಗೋ ನಿನ್ನ ಮೌನಕ್ಕೆ ನನ್ನ ಮೌನದ ಚಪ್ಪಾಳೆ..
ಏನನ್ನೂ ಹೇಳಲಾಗದ ಸಮಯ,
ಎಲ್ಲವನ್ನು ಹೇಳಬಯಸುವ ಸಮಯ,
ಎರಡಕ್ಕೂ ಮೌನವೆ ಸಮ೦ಜಸ

ಇರುಳ ದೀಪ

ಮನೆಯೊಳಗೆ ಕತ್ತಲು ಕವಿದಿತ್ತು,
ಮನ ಬೆಳಕಿಗಾಗಿ ಕಾಯುತ್ತಿತ್ತು,
ಕಿಟಕಿಯ ಬಳಿ ನಿ೦ತ ನನಗೆ
ಕಾಣಿಸಿತು ನಿನ್ನ ಮೋಹಕ ಮೊಗದ ನಗೆ,

ನೀನು ಇರುಳಿಗೆ ದೀಪ,
ನೆನಪುಗಳ ಪ್ರತಿರೂಪ,
ನೀನಿರುವ ಊರಲ್ಲಿ ದೀಪವೇ ದೀಪ,
ಮೈಮರೆತೆ ನೋಡಿ ನಿನ್ನ ಝಗಮಗಿಸುವ ರೂಪ...
ನಿಲುಕದೆ ನೀನಿರುವೆ ನೀಲಕಾಶದಲ್ಲಿ,
ಮನೆ ಮಾಡಿರುವೆ ಎಲ್ಲರ ಮನದಲ್ಲಿ....
ತನ್ನ ಕ೦ದನಿಗಾಗಿ ಹಾಡುವ ತಾಯಿಯ ಜೋಗುಳದಲ್ಲಿ..
ಪ್ರೇಯಸಿಯ ಓಲೈಸುವ ಒಲವಿನ ಕರೆಯೊಲೆಯಲ್ಲಿ..
ಭಾವನೆಗಳ ಆಗರವಾಗಿರುವ ಕವಿಗಳ ಕವನದಲ್ಲಿ...
ಈ ನನ್ನ ಪುಟ್ಟ ಹೃದಯ ನೈದಿಲೆಯಾಗಿ ಅರಳಿದೆ ಬಲ್ಲೆಯಾ?
ಎಲ್ಲೋ ಇರುವ ಗೆಳೆಯಗೆ ನನ್ನ ಮನದ ಸ೦ದೇಶ ನೀಡುವೆಯಾ?
ನಿನ್ನ ಬೆಳದಿ೦ಗಳ ರಾಶಿಯಲಿ ಅವನೊಡಗೂಡಿ ನಡೆಯುವ ನನ್ನ ಮನದ ಹ೦ಬಲ..ತಿಳಿಸುವೆಯಾ?

ಸವಿ ನೆನಪು

ಹೃದಯದಿ೦ದ ಪುಟಿದೇಳುವ ಕಣ್ಮು೦ದೆ ತೇಲಿಹೋಗುವ
ಮನಸ್ಸಿಗೆ ಮೋಡಿಹಾಕುವ ನೆನಪಿನ೦ಗಳಕ್ಕೆ ಕರೆದೊಯ್ಯುವ
ಆ ಸು೦ದರ ಸಾವಿರ ಸವಿ ಸವಿ ನೆನಪು
ನೀಲಕಾಶದ೦ತ ನಿನ್ನ ಕಣ್ಣಲ್ಲಿ ಕ೦ಡ
ಆ ಮೊದಲ ಪ್ರೀತಿಯ ನೆನಪು
ನಿನ್ನ ಒ೦ದೇ ಒ೦ದು ನೋಟಕ್ಕಾಗಿ ಎದುರು ನೋಡುತ್ತಿದ್ದ
ಆ ದಿನಗಳ ಎಳೆಮನಸ್ಸಿನ ನೆನಪು
ಮು೦ಗಾರಿನ ಸ್ಫರ್ಶದಿ೦ದ ಕಾಲ್ಗಳಿಗೆ ಕಚಗುಳಿಯಿಡುತ್ತಿದ್ದ
ಹಸಿರು ಹುಲ್ಲಿನ ಮೇಲೆ ಒಟ್ಟಾಗಿ ಹೆಜ್ಜೆ ಹಾಕಿದ ಹಸಿರು ನೆನಪು
ತ೦ಗಾಳಿ ಮೈ ಸೋಕಿದಾಗ ಆದ
ಆ ಮೊದಲ ರೋಮಾ೦ಚನದ ನೆನಪು
ಹೂದೋಟದ ನಡುವೆ ನಿನ್ನ ಹೆಗಲ ಮೇಲೆ
ತಲೆ ಇರಿಸಿ ಜಗವ ಮರೆತ ಹೂವ೦ತ ನೆನಪು
ಹುಸಿಮುನಿಸು ತೋರಿದಾಗ ಕೈ ಜೋಡಿಸಿ
ತು೦ಟತನ ತೋರಿದ ಆ ಸು೦ದರ ಸ೦ಜೆಯ ನೆನಪು
ಪ್ರತಿ ಹಾಡಿನಲ್ಲು ನಿನ್ನನ್ನೆ ನೆನಪಿಸುತ್ತಿದ್ದ
ನಿನ್ನ ನಿಸ್ವಾರ್ಥ ಪ್ರೀತಿಯ ನೆನಪು
ಹತ್ತಾರು ದಿನಗಳ ನ೦ತರ ನಮ್ಮ ಭೇಟಿಯಾದಾಗ
ಮಗುವ೦ತೆ ಬಿಗಿದಪ್ಪಿ ಅತ್ತ ಆ ಸುಮಧುರ ನೆನಪು
ನಿನ್ನ ಹೆಸರಿನ ಮೊದಲಕ್ಷರ ಕೇಳಿ ನಾಡಿ ಬಡಿತ
ನೂರಕ್ಕೇರುತ್ತಿದ್ದ ಆ ಭಾವನಾತ್ಮಕ ನೆನಪು

ಸಾವಿರ ಸಾವಿರ ಸವಿ ನೆನಪುಗಳನ್ನ ಬಚ್ಚಿಟ್ಟುರುವ
ಈ ಪುಟ್ಟ ಹೃದಯದ ಪ್ರತಿ ಬಡಿತವು ನಿನ್ನಿ೦ದ ನಿನಗಾಗಿ.....

ಮಲ್ಲಿಗೆ...


ಮು೦ಜಾನೆಯ ತು೦ತುರು
ಮ೦ಜು ಹೂಗಳ ಮೇಲೆ,
ಮುತ್ತಿನ ಇಬ್ಬನಿ
ಹಚ್ಚ ಹಸುರಿನ ಎಲೆಗಳ ಮೇಲೆ,
ರಾತ್ರಿಯಿಡೀ ಮಳೆರಾಯನ
ಪ್ರೀತಿಯ ಸುರಿಮಳೆ,
ಬೇಸಿಗೆಯ ಝಳದಿ೦ದ
ಮುಕ್ತಿ ಪಡೆದ ಮೇಲೆ
ಮಿ೦ದು ಮಡಿಯುಟ್ಟು
ನಾಚಿ ನಿ೦ತ ಚೆಲುವೆಯ೦ತೆ
ನಲ್ಲನ ಮೈ ಮನ ಸೂರೆಗೊಳ್ಳಲು
ಸಜ್ಜಾಗಿ ನಿ೦ತ೦ತಿದೆ...
ಆ ಮಾಧವನ ಪಾದಕ್ಕೆ ಅರ್ಪಿತವಾಗಲು ಸರಿ,
ಅವನ ಎದೆಯ ಮೇಲೆ ರಾರಾಜಿಸುವ ಹಾರವಾಗಲು ಸರಿ...
ಮಲ್ಲಿಗೆ...ಬರುವ ನಲ್ಲ ನೀನಿದ್ದಲ್ಲಿಗೆ