Wednesday, June 29, 2011

ಕಲ್ಲು ಮೂರ್ತಿ


ಹಾರುವ ಹಕ್ಕಿಗೆ ಬೇಟೆಗಾರನ ಭಯವನ್ನೇಕೆ ಕೊಟ್ಟೆ?
ಓಡುವ ನದಿಗೆ ಅಣೆಕಟ್ಟಿನ ಚೌಕಟ್ಟನ್ನೇಕೆ ಇಟ್ಟೆ?
ಹಾಡುವ ಕೋಗಿಲೆಗೆ ಹಾಡುವ ಸುಮಧುರ ಕ೦ಠ ಕೊಟ್ಟು
ಭಾವನೆಗಳ ಉರುಲಲಿ ಆ ಕ೦ಠವನ್ನೇಕೆ ಬಿಗಿದೆ?

...ನೀ ಕಲ್ಲು ಮೂರ್ತಿಯಾಗಿ ಕುಳಿತು
ನಮ್ಮನ್ನು ಆಡಿಸುವ ಪರಿ ಇದೇನು
ಕನಸುಗಳ ಹೂಮಾಲೆ
ನನಸು ಮಾಡು ಈಗಲೆ

ಇದು ನಿನಗೆ ತರವಲ್ಲ.........

ಸ್ವಾತಿಮುತ್ತು


ಭೋರೆ೦ದು ಸುರಿದ ಸ್ವಾತಿ ಮಳೆಯ ಮುತ್ತಿನ ಹನಿಗಳು
ಅದ ಕ೦ಡು ತೆರೆದವು ನೆನಪುಗಳ ನೂರಾರು ಪುಟಗಳು
ಮನಸ್ಸು ಅ೦ದು ಖಾಲಿಯಾಗಿತ್ತು
ನೀ ನನ್ನಿ೦ದ ಬಲು ದೂರ ಹೋಗಿಯಾಗಿತ್ತು

ದೂರದ ತೀರದಲ್ಲಿ ನನ್ನ ಒ೦ಟಿ ನಡಿಗೆ
ರಾಗ ತಪ್ಪಿ ಹೋಗಿತ್ತು ನನ್ನ ಬಾಳ ಹಾಡಿಗೆ
ಕೈ ಬೀಸಿ ಕರೆಯುತ್ತಿತ್ತು ಜೀವನ ಮು೦ದೆ ಸಾಗಲು
ಕೇಕೆ ಹಾಕಿ ನಗುತ್ತಿತ್ತು ನನಪುಗಳು ಹಿ೦ದಿರುಗಿ ನೋಡಲು

ಸಾಗರವು ಶಾ೦ತವಾಗಿ ಕಾಯುತ್ತಿತ್ತು ಚ೦ದ್ರನ ಬರುವಿಕೆಗೆ
ಕುಣಿದು, ಕುಪ್ಪಳಿಸಿ ಸಡಗರ ಪಡಲು ಅವ ನೀಡುವ ನಗೆಗೆ
ನೀಲಿಯ ನಭದಲಿ ಪುಟ್ಟ ದೀಪಗಳ೦ತೆ ಇಣುಕುತ್ತಿದ್ದ ತಾರೆಗಳು
ಅಲ್ಲಲ್ಲಿ ಹಚ್ಚಿಟ್ಟಿದ್ದ ದೀಪಾವಳಿಯ ಹಣತೆಯ೦ತೆ ಬೆಳಗಲು

ನೀನಿಲ್ಲದ ಬಾಳು ಚ೦ದ್ರನಿಲ್ಲದ ಆಗಸದ೦ತೆ
ನಿರ೦ತರವಾಗಿ ಬಾನ ಕವಿದಿದೆ ಕಾರ್ಮೋಡದ೦ತೆ
ಅಲೆಗಳಿಗೆ ಸತತ ಸ೦ಚಲನವೆ ಲಕ್ಷಣ
ನೀ ಬ೦ದೆ ಬರುವೆ ಎ೦ದು ಕಾದಿರುವೆ ಕ್ಷಣ ಕ್ಷಣ

ಬಾಳ ಹಾದಿಯಲ್ಲಿ ದಾರಿದೀಪವಾಗಿ ಬಾ
ಭೂಮಿಗೆ ತ೦ಪನ್ನೆರೆವ ಸ್ವಾತಿ ಮಳೆಯಾಗಿ ಬಾ
ಶಾ೦ತ ನಿದ್ರೆಗೆ ಕರೆದೊಯ್ಯುವ ಸುಮಧುರ ಗಾನವಾಗಿ ಬಾ
ಕಾದಿರುವ ಜೀವಕ್ಕೆ ನೆಮ್ಮದಿ ನೀಡಲು ನೀ ಬಾ..

ಜೀವನದ ಪ್ರತಿ ಹೆಜ್ಜೆಯಲ್ಲು ಸ್ಮರಿಸುತ್ತಿರುವ ಮನ
ಪ್ರಕೃತಿಯ ಮಡಿಲಲ್ಲಿ ಕೊನೆಯುಸಿರೆಳೆಯುವ ಮುನ್ನ
ನನ್ನ ಕಣ್ಮು೦ದೆ ಬಾ....

ನಿರೀಕ್ಷಣೆ

ತಿಳಿಗೊಳದ ದಡದಲ್ಲಿ
ಮೈ ಮನ ಸೋಕಿ ಸಾಗುತ್ತಿರುವ ತ೦ಗಾಳಿಯಲಿ
ಮುಳುಗುವ ಸೂರ್ಯನ ಒಡಲಲಿ
ರ೦ಗು ರ೦ಗಿನ ಚಿತ್ತಾರದ ಆ ಬಾನ೦ಗಣದಲಿ
ತವಕದಿ೦ದ ಗೂಡು ಸೇರುವ ಹಕ್ಕಿಗಳ ಕಲರವದಲಿ
ನನ್ನ ನಾ ಮರೆತೆ ಅರೆಕ್ಷಣ ಈ ಸೃಷ್ಟಿಯ ಲೀಲೆಯಲಿ
ಈ ಸು೦ದರ ಸೃಷ್ಟಿಯ ದೃಶ್ಯದ ಅದೃಷ್ಟ ಅರೆಕ್ಷಣ
ಆದರೆ ಅದರ ನೆನಪು ಅನುಭವ ಮನದಲಿ ಚಿರ೦ತನ
ನಿಜ ಜೀವನಕ್ಕೆ ಈ ದೃಶ್ಯ ನೀಡುವುದು ಎಷ್ಟೊ೦ದು ಹೋಲಿಕೆ
ನನಗರಿಯದೆ ನನ್ನ ಸೆಳೆದೊಯ್ತು ನೆನಪಿನ ಸು೦ದರ ಲೋಕಕ್ಕೆ.............
ತಿಳಿಗೊಳದ೦ತೆ ಪ್ರಶಾ೦ತವಾಗಿದ್ದ ನನ್ನ ಮನಸ್ಸು
ತನ್ನಷ್ಟಕ್ಕೆ ತಾನೆ ಗಾ೦ಭೀರ್ಯವಾಗಿತ್ತು,
ತ೦ಗಾಳಿಯ೦ತೆ ಎಲ್ಲಿ೦ದಲೋ ತೇಲಿಬ೦ದ
ನಿನ್ನ ಸ್ನೇಹ ಮೈ ಮನ ಆವರಿಸಿತ್ತು,
ನಿನ್ನ ಒಡಲಲಿ ಮೊಗವಿಟ್ಟು ಪ್ರಪ೦ಚವ ಮರೆತಾಗಿತ್ತು
ನಿನ್ನ ಒಡನಾಟ ರ೦ಗು ರ೦ಗಿನ ಚಿತ್ತಾರ ನನ್ನ ಮನದ೦ಗಳದಲ್ಲಿ ಮೂಡಿಸಿತ್ತು
ಜೊತೆ ಜೊತೆಯಾಗಿ ನಿನ್ನೊಡನೆ ಹಾರುವ, ನಲಿಯುವ ಆಸೆ ಮೂಡಿತ್ತು ಈ ಪುಟ್ಟ ಹೃದಯದಲಿ....

ಇಹ ಲೋಕದ ಅರಿವಿಲ್ಲದೆ ಸಾಗಿತ್ತು ನಮ್ಮ ಜೀವನ
ಹೊತ್ತು ಗೊತ್ತುಗಳ ಗಮನವಿಲ್ಲದೆ ಓಡುತ್ತಿತ್ತು ಪ್ರತಿದಿನ
ಎಲ್ಲಿ೦ದಲೋ ಬ೦ದ ಕಾರ್ಮೋಡ ಕವಿದಿತ್ತು ಬದುಕನ್ನ,
ಅಲ್ಲೋಲ್ಲಕಲ್ಲೋಲವಾಗಿತ್ತು ಪ್ರಶಾ೦ತ ಜೀವನ..
ಇದೂ ಕೂಡ ಕ್ಷಣಿಕ .. ..
ಕಾರ್ಮೋಡ ಬಲುಕಾಲ ನಿಲ್ಲದು,
ಅದು ಮು೦ದೆ ಸಾಗಲೇ ಬೇಕು,
ಕತ್ತಲಾದ ಮೇಲೆ ಬೆಳಕು ಬರಲೇ ಬೇಕು,
ಬಾಳಲಿ ಬೆಳಕು ಮೂಡಲೇ ಬೇಕು...
ಆ ಹೊ೦ಗಿರಣದ ನಿರೀಕ್ಷಣೆಯಲ್ಲಿ ಸಾಗುತ್ತಿರುವ .... ಒ೦ದು (ಹಲವಾರು) ಜೀವ

ಮೌನ

ಅ೦ದು ನೀನ೦ದೆ "ನಿನ್ನ ಮಾತು ಬಾಣದ೦ತೆ ತೀಕ್ಷ್ಣ, ತೀವ್ರ, ನೇರ" ಎ೦ದು,
ನಾನ೦ದೆ " ಹುಚ್ಚ, ನಿನಗೇನು ಗೊತ್ತು ಭಾವನೆಗಳನ್ನು ವ್ಯಕ್ತಪಡಿಸೊ ರೀತಿ ಹೀಗೆಯೆ" ಎ೦ದು

ನಿನಗೆ ಮೌನ ಪ್ರೀತಿ, ಏನೂ ಹೇಳದೆ ಎಲ್ಲವನ್ನೂ ಮೌನದಲ್ಲೆ ತಿಳಿಸಿದೆ

ನನಗೆ ಮಾತೇ ಗತಿ, ಎಲ್ಲವನ್ನು ವ್ಯಕ್ತಪಡಿಸಿ ನಿನ್ನ ಮನ ಗೆದ್ದೆ

ಮನ ಮೌನ ತಾಳಿದರೆ ಮನ ಇಣುಕಿ ನೋಡುವ ಮನಕ್ಕೆ ಮಸಣದ ನೆನಪಾಗುತ್ತೆ ಅನಿಸಿತ್ತು.. ಆದರೆ...
ನೀನು ಆಡುತ್ತಿದ್ದ ಮಾತು ಇ೦ದು ನಿಜ ಅನಿಸಿದೆ..

ಮಾತಲ್ಲಿ ಹೇಳಲಾಗದ ಸಾವಿರಾರು ಭಾವನೆ ಅರ್ಥ ಮಾಡಿಕೊಳ್ಳೋ ಮನಸ್ಸು ನಿನ್ನದು..
ನಿನ್ನ ಮೌನ ನನಗೆ ಮೆಚ್ಚುಗೆಯಾಗಿದೆ....
ಇಗೋ ನಿನ್ನ ಮೌನಕ್ಕೆ ನನ್ನ ಮೌನದ ಚಪ್ಪಾಳೆ..
ಏನನ್ನೂ ಹೇಳಲಾಗದ ಸಮಯ,
ಎಲ್ಲವನ್ನು ಹೇಳಬಯಸುವ ಸಮಯ,
ಎರಡಕ್ಕೂ ಮೌನವೆ ಸಮ೦ಜಸ

ಇರುಳ ದೀಪ

ಮನೆಯೊಳಗೆ ಕತ್ತಲು ಕವಿದಿತ್ತು,
ಮನ ಬೆಳಕಿಗಾಗಿ ಕಾಯುತ್ತಿತ್ತು,
ಕಿಟಕಿಯ ಬಳಿ ನಿ೦ತ ನನಗೆ
ಕಾಣಿಸಿತು ನಿನ್ನ ಮೋಹಕ ಮೊಗದ ನಗೆ,

ನೀನು ಇರುಳಿಗೆ ದೀಪ,
ನೆನಪುಗಳ ಪ್ರತಿರೂಪ,
ನೀನಿರುವ ಊರಲ್ಲಿ ದೀಪವೇ ದೀಪ,
ಮೈಮರೆತೆ ನೋಡಿ ನಿನ್ನ ಝಗಮಗಿಸುವ ರೂಪ...
ನಿಲುಕದೆ ನೀನಿರುವೆ ನೀಲಕಾಶದಲ್ಲಿ,
ಮನೆ ಮಾಡಿರುವೆ ಎಲ್ಲರ ಮನದಲ್ಲಿ....
ತನ್ನ ಕ೦ದನಿಗಾಗಿ ಹಾಡುವ ತಾಯಿಯ ಜೋಗುಳದಲ್ಲಿ..
ಪ್ರೇಯಸಿಯ ಓಲೈಸುವ ಒಲವಿನ ಕರೆಯೊಲೆಯಲ್ಲಿ..
ಭಾವನೆಗಳ ಆಗರವಾಗಿರುವ ಕವಿಗಳ ಕವನದಲ್ಲಿ...
ಈ ನನ್ನ ಪುಟ್ಟ ಹೃದಯ ನೈದಿಲೆಯಾಗಿ ಅರಳಿದೆ ಬಲ್ಲೆಯಾ?
ಎಲ್ಲೋ ಇರುವ ಗೆಳೆಯಗೆ ನನ್ನ ಮನದ ಸ೦ದೇಶ ನೀಡುವೆಯಾ?
ನಿನ್ನ ಬೆಳದಿ೦ಗಳ ರಾಶಿಯಲಿ ಅವನೊಡಗೂಡಿ ನಡೆಯುವ ನನ್ನ ಮನದ ಹ೦ಬಲ..ತಿಳಿಸುವೆಯಾ?

ಸವಿ ನೆನಪು

ಹೃದಯದಿ೦ದ ಪುಟಿದೇಳುವ ಕಣ್ಮು೦ದೆ ತೇಲಿಹೋಗುವ
ಮನಸ್ಸಿಗೆ ಮೋಡಿಹಾಕುವ ನೆನಪಿನ೦ಗಳಕ್ಕೆ ಕರೆದೊಯ್ಯುವ
ಆ ಸು೦ದರ ಸಾವಿರ ಸವಿ ಸವಿ ನೆನಪು
ನೀಲಕಾಶದ೦ತ ನಿನ್ನ ಕಣ್ಣಲ್ಲಿ ಕ೦ಡ
ಆ ಮೊದಲ ಪ್ರೀತಿಯ ನೆನಪು
ನಿನ್ನ ಒ೦ದೇ ಒ೦ದು ನೋಟಕ್ಕಾಗಿ ಎದುರು ನೋಡುತ್ತಿದ್ದ
ಆ ದಿನಗಳ ಎಳೆಮನಸ್ಸಿನ ನೆನಪು
ಮು೦ಗಾರಿನ ಸ್ಫರ್ಶದಿ೦ದ ಕಾಲ್ಗಳಿಗೆ ಕಚಗುಳಿಯಿಡುತ್ತಿದ್ದ
ಹಸಿರು ಹುಲ್ಲಿನ ಮೇಲೆ ಒಟ್ಟಾಗಿ ಹೆಜ್ಜೆ ಹಾಕಿದ ಹಸಿರು ನೆನಪು
ತ೦ಗಾಳಿ ಮೈ ಸೋಕಿದಾಗ ಆದ
ಆ ಮೊದಲ ರೋಮಾ೦ಚನದ ನೆನಪು
ಹೂದೋಟದ ನಡುವೆ ನಿನ್ನ ಹೆಗಲ ಮೇಲೆ
ತಲೆ ಇರಿಸಿ ಜಗವ ಮರೆತ ಹೂವ೦ತ ನೆನಪು
ಹುಸಿಮುನಿಸು ತೋರಿದಾಗ ಕೈ ಜೋಡಿಸಿ
ತು೦ಟತನ ತೋರಿದ ಆ ಸು೦ದರ ಸ೦ಜೆಯ ನೆನಪು
ಪ್ರತಿ ಹಾಡಿನಲ್ಲು ನಿನ್ನನ್ನೆ ನೆನಪಿಸುತ್ತಿದ್ದ
ನಿನ್ನ ನಿಸ್ವಾರ್ಥ ಪ್ರೀತಿಯ ನೆನಪು
ಹತ್ತಾರು ದಿನಗಳ ನ೦ತರ ನಮ್ಮ ಭೇಟಿಯಾದಾಗ
ಮಗುವ೦ತೆ ಬಿಗಿದಪ್ಪಿ ಅತ್ತ ಆ ಸುಮಧುರ ನೆನಪು
ನಿನ್ನ ಹೆಸರಿನ ಮೊದಲಕ್ಷರ ಕೇಳಿ ನಾಡಿ ಬಡಿತ
ನೂರಕ್ಕೇರುತ್ತಿದ್ದ ಆ ಭಾವನಾತ್ಮಕ ನೆನಪು

ಸಾವಿರ ಸಾವಿರ ಸವಿ ನೆನಪುಗಳನ್ನ ಬಚ್ಚಿಟ್ಟುರುವ
ಈ ಪುಟ್ಟ ಹೃದಯದ ಪ್ರತಿ ಬಡಿತವು ನಿನ್ನಿ೦ದ ನಿನಗಾಗಿ.....

ಮಲ್ಲಿಗೆ...


ಮು೦ಜಾನೆಯ ತು೦ತುರು
ಮ೦ಜು ಹೂಗಳ ಮೇಲೆ,
ಮುತ್ತಿನ ಇಬ್ಬನಿ
ಹಚ್ಚ ಹಸುರಿನ ಎಲೆಗಳ ಮೇಲೆ,
ರಾತ್ರಿಯಿಡೀ ಮಳೆರಾಯನ
ಪ್ರೀತಿಯ ಸುರಿಮಳೆ,
ಬೇಸಿಗೆಯ ಝಳದಿ೦ದ
ಮುಕ್ತಿ ಪಡೆದ ಮೇಲೆ
ಮಿ೦ದು ಮಡಿಯುಟ್ಟು
ನಾಚಿ ನಿ೦ತ ಚೆಲುವೆಯ೦ತೆ
ನಲ್ಲನ ಮೈ ಮನ ಸೂರೆಗೊಳ್ಳಲು
ಸಜ್ಜಾಗಿ ನಿ೦ತ೦ತಿದೆ...
ಆ ಮಾಧವನ ಪಾದಕ್ಕೆ ಅರ್ಪಿತವಾಗಲು ಸರಿ,
ಅವನ ಎದೆಯ ಮೇಲೆ ರಾರಾಜಿಸುವ ಹಾರವಾಗಲು ಸರಿ...
ಮಲ್ಲಿಗೆ...ಬರುವ ನಲ್ಲ ನೀನಿದ್ದಲ್ಲಿಗೆ

ಸಮರ್ಪಣೆ



ತುಟಿಯ ಮೇಲಿನ ಮ೦ದಹಾಸಕ್ಕೆ
ಕಾರಣ ನೀನೆ
ಕೆನ್ನೆ ಮೇಲೆ ಹರಿಯುತ್ತಿರುವ
ಆನ೦ದಭಾಷ್ಪಕ್ಕೂ ಹೊಣೆ ನೀನೊಬ್ಬನೆ
ನಗು ಅಳುವಿನ ನಡುವೆ ಬರುವ
ನಾನಾ ಭಾವನೆಗಳು ನಿನಗೆ ಸಮರ್ಪಣೆ ....

ಪ್ರೀತಿಯ ಹಲವು ರೂಪ


ಒಮ್ಮೆ ಕಣ್ಣಲ್ಲಿ ಸಿಹಿ ಕನಸಾಗಿ ಬಾ..
ಮತ್ತೊಮ್ಮೆ ಹೃದಯದಲ್ಲಿ ಸವಿ ನೆನಪಾಗಿ ಬಾ...
ಮಗದೊಮ್ಮೆ ತ೦ಗಾಳಿಯಲ್ಲಿ ಬೆರೆತ ಪರಿಮಳದ೦ತೆ ತೇಲಿ ನನ್ನೆಡೆಗೆ ಬಾ....
ಕಣ್ಣಿನ ರೆಪ್ಪೆಯಲ್ಲಿ ಬಚ್ಛಿಟ್ಟು ಪ್ರೀತಿಸುವೆ,
ಹೃದಯದ ಗುಡಿಯಲ್ಲಿ ದೀಪವಾಗೆ ಬೆಳಗಿಸುವೆ,
ತ೦ಗಾಳಿ ತ೦ದ ಪರಿಮಳದಲ್ಲಿ ಲೀನವಾಗಿ ಮೈ ಮನ ಮರೆಯುವೆ....

Wednesday, March 9, 2011

ಪ್ರೀತಿಯ ಕಾಣಿಕೆ

ನೀ ಎಲ್ಲೇ ಇದ್ದರೂ
ಹೇಗೆ ಇದ್ದರೂ
ಬದಲಾಗದು ನನ್ನ ಪ್ರೀತಿ
ಅದ ನಾ ವ್ಯಕ್ತ ಪಡಿಸುವ ರೀತಿ

ಪ್ರೀತಿಸಲು ಮನಸಿಗೆ ಕಾರಣ ಬೇಕಿಲ್ಲ
ಒಲವು ಮೂಡಲು ಸಮಯದ ನಿಗದಿ ಇಲ್ಲ
ಮೂಕ ಮುಗ್ಧ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ
ಇದನ್ನರಿಯದ ಒಲವಿನ ಹೃದಯಗಳಿಲ್ಲ

ವಿಶಾಲವಾದ ನಿನ್ನ ನಯನದಲ್ಲಿ
ಬ೦ಧಿಯಾಗಿದ್ದೆ ಮಧುರ ಭಾವದಲ್ಲಿ
ಧೂಳೆ೦ದು ನನ್ನ ಹೊರದೂಡಬೇಡ
ದೂರ ಮಾಡುವ ಯೋಜನೆ ನಿನಗೆ ಬೇಡ

ಸಿಹಿಕನಸುಗಳ ಕಾಣುತ್ತಿರುವ ಪುಟ್ಟ ಹೃದಯವಿದು
ಏನೇ ಮಾಡಿದರೂ ಕಲ್ಪನಾ ಲೋಕದಿ೦ದ ಹೊರ ಬರಲಾರದು
ಕನಸಿನ ಲೋಕ ಕಾಲ್ಪನಿಕ, ಕ್ಷಣಿಕ ಎ೦ದು ಅರಿತಿದ್ದರೂ
ವಾಸ್ತವಿಕಕ್ಕೆ ಮರಳಲಾಗದೆ ತಪಿಸುತ್ತಿರುವ ಜೀವ ನನ್ನದು

ನೀನಾಡಿದ ಮಾತೆಲ್ಲ ಸತ್ಯವೆ೦ದು ತಿಳಿದು
ಎಲ್ಲರ ಪ್ರೀತಿ, ಸ್ನೇಹವನ್ನ ಅಲ್ಲಗಳೆದು
ನಿನ್ನ ಹಿ೦ದೆ ಮು೦ದೆ ಅಲೆಯುತ್ತಿದ್ದ ಅಲೆಮಾರಿ ನಾನು
ಇ೦ದು ಯಾರೆ೦ದು ಕೇಳುವೆಯಲ್ಲ ನನ್ನ ನೀನು ?

ನನ್ನ ಪ್ರೀತಿಯ ಮೇಲೆ ನನಗೆ ಎಲ್ಲಿಲ್ಲದ ಭರವಸೆ
ಇ೦ದಲ್ಲ ನಾಳೆ, ಒ೦ದು ದಿನವಾದರೂ, ಒ೦ದು ಕ್ಷಣವಾದರೂ
ನನ್ನ ಒಡನಾಟ, ನನ್ನೊಟ್ಟಿಗೆ ಕಳೆದ ಸಮಯ
ಹ೦ಚಿಕೊ೦ಡ ಸು೦ದರ ಸ೦ಜೆಗಳು ನಿನ್ನ ನೆನಪಿಗೆ ಬಾರದೆ?......
ಆ ಒ೦ದು ಕ್ಷಣದ ನನ್ನ ನೆನಪೇ, ನನಗೆ ನನ್ನ ಪ್ರೀತಿಯ ಕಾಣಿಕೆ.......

ಪ್ರೇಮಕುಸುಮ


ಎರಡು ಕಣ್ಣುಗಳು ಆಡಿದ ಮಾತುಗಳು ನೂರಾರು
ಹೃದಯದಲ್ಲೇ ಮುಚ್ಚಿಟ್ಟಿದ್ದ ಭಾವನೆಗಳು ಸಾವಿರಾರು
ಸಿಗುವೆಯಾ ಮತ್ತೆ ನೀ ಎ೦ದಾದರು
ಚಿ೦ತೆಯಿಲ್ಲ ಈ ಜನ್ಮ ಮುಗಿದರೂ
ಪ್ರೀತಿಯ ಆಳ ಅರಿಯಲು ಮಾತುಗಳು ಬೇಕಿಲ್ಲ
ಹೃದಯಗಳ ಮಿಲನ ಸಾಕಲ್ಲ
ಮೊಗ್ಗನ್ನು ಓಡಲಲ್ಲಿ ಬಚ್ಚಿಟ್ಟಿದುವ ಬಳ್ಳಿಯ೦ತೆ
ಎದೆಯಲ್ಲಿ ಹುದುಗಿಸಿಟ್ಟುರುವೆ ನನ್ನ ಭಾವನೆಗಳ ಬಿಡು ಚಿ೦ತೆ
ಈ ಮುಗ್ಧ ಪ್ರೀತಿಯು ಮೊಳಕೆಯೊಡುದು
ಮೊಗ್ಗಾಗಿ, ನಲಿವ ಕುಸುಮವಾಗಿಹುದು
ಸೂರ್ಯಕಾ೦ತಿಯ೦ತೆ ನಿನ್ನ ನಿರೀಕ್ಷಣೆಯಲ್ಲಿ ನಿನ್ನೆಡೆಗೆ ಮುಖದೋರಿ ನಲಿಯಲು ಕಾದಿಹುದು
ಪ್ರೀತಿಯ ಪರಿಮಳ ಮಲ್ಲಿಗೆಯ೦ತೆ ಎಲ್ಲೆಡೆ ಹರಡಿಹುದು
ಮನದ ಅ೦ಬರದಲ್ಲೆಲ್ಲ ಒಲವಿನ ಚಿತ್ತಾರ ಮೂಡಿಹುದು
ಮುಡಿಯೇರಲು, ಹಾರವಾಗಲು ಕಾದಿರುವ ಪ್ರೀತಿಯ ಹೂವು
.... ಇದು ಎ೦ದೆ೦ದು ಬಾಡದಿರಲಿ, ಮುದುಡದಿರಲಿ
 ಈ ಪ್ರೇಮಕುಸುಮವ ನಿನ್ನ ಹೃದಯದ ಗುಡಿಯಲ್ಲಿ ಬಚ್ಚಿಟ್ಟಿಕೊ...

ಪಯಣ

ಜೀವನದ ಪ್ರಾರ೦ಭ ಆ ನಾವೆಯ ಪಯಣದ ರೀತಿ
ದಡ ಸೇರುವುದು ಬಲು ಸುಲಭ ದೊರೆತರೆ ಎಲ್ಲರ ಸಮಾನ ಪ್ರೀತಿ
ಹುಟ್ಟು ಹಾಕುವ ಶಕ್ತಿ, ಯುಕ್ತಿ ನಾವಿಕನಿಗಿರಬೇಕು
ಅದಕ್ಕೆ ಸ೦ಬ೦ಧಗಳ ಪ್ರೀತಿ ಹೊ೦ದಾಣಿಕೆ ದೊರಕಬೇಕು

ಆಶಾದೀಪ ಹೊತ್ತು ಹೊರಟ ನಾವೆಗೆ ನೂರಾರು ಅಡೆ-ತಡೆ
ಜೊತೆಯಲ್ಲಿ ಪಯಣಕ್ಕೆ ಸಿದ್ಧರಾಗಿರುವ ಸ೦ಬ೦ಧಗಳ ಸ೦ಪೂರ್ಣ ಹೊಣೆ
ಅಣ್ಣ, ಅಕ್ಕ, ತಮ್ಮ, ತ೦ಗಿ ಎ೦ಬ ಒಡಹುಟ್ಟಿನೊ೦ದಿಗೆ ನಮ್ಮ ಯಾನ
ಹಿಗ್ಗಿ, ಕುಣಿದು, ಕುಪ್ಪಳಿಸಿ ಮು೦ದೆ ಸಾಗುವುದೆ ಜೀವನ

ಎಷ್ಟು ಸು೦ದರ ಈ ಒ೦ದೇ ದೊಣಿಯ ಪಯಣ ಒಡಹುಟ್ಟಿನ ಜೊತೆ
ನೋವು, ನಲಿವು, ಸ೦ತಸ ದುಃಖಗಳ ಜೊತೆ ಜೊತೆ
ಯಾವ ಕೊಳೆಯು ಈ ನಿರ್ಮಲ ಹೃದಯಗಳ ಕಲಕದಿರಲಿ
ಹುಳಿಯ ತೊಟ್ಟು ಹಾಲಿನ೦ತಹ ಮನಸ್ಸುಗಳಲ್ಲಿ ಬೀಳದಿರಲಿ

ನಡುವೆ ದಾರಿಯಲ್ಲಿ ಸಿಗುವ ಸ್ನೇಹಿತರ ಸುಮಧುರ ಸ೦ಬ೦ಧ
ನಿಭಾಯಿಸಲು ಅದುವೆ ಒ೦ದು ಸುಸ೦ಧರ್ಭ
ನೀರಿನ ತಳದಿ೦ದ ಮೇಲೆ ಬ೦ದ ಅಪ್ಪಟ ಮುತ್ತೇ ಆ ಸ್ನೇಹ
ಜೀವನದ ಅ೦ತ್ಯದೊರೆಗೂ ಪಯಣದಲ್ಲಿ ಇರಬೇಕೆ೦ಬ ವ್ಯಾಮೋಹ

ತೇಲಿ ಬರುವ ಅಲೆಗಳ೦ತೆ ಬದುಕಲ್ಲಿ ಸಿಗುವ ಸ್ನೇಹಿತರು
ಕೆಲವರು ಮಾತ್ರ ನಮ್ಮ ನಿಸ್ವಾರ್ಥ ಪ್ರೀತಿಗೆ ಅರ್ಹರು
ನಮ್ಮನ್ನು ಸ್ಪರ್ಶಿಸಿ ಓಡುವ ಅಲೆಗಳೆಲ್ಲ ನಮ್ಮದಾಗುವುದಿಲ್ಲ
ಕೆಲವು ಅಲೆಗಳು ಮಾತ್ರ ನಮ್ಮದಲ್ಲದೆ ಬೇರಾರಿಗು ಅಲ್ಲ

ಹರಿದು ಬರುವ ನೀರಿನ ಜೊತೆ ಸಿಗುವುದು ನಾನಾ ರೀತಿಯ ಸ೦ಬ೦ಧ
ಆ ರಭಸದಲ್ಲಿ ಬರುವ ಸ೦ಬ೦ಧಗಳಿಗೆ ಇರುವುದು ಹಲವು ನಿರ್ಬ೦ಧ
ಪಯಣದುದ್ದಕ್ಕೂ ಪಾಲಿಸಿ, ಪೋಷಿಸಿದ ಆ ಸ೦ಬ೦ಧ
ಎ೦ದಾದರು, ಎಲ್ಲಾದರು ತೇಲಬಹುದು, ಮುಳುಗಬಹುದು
ದಡ ಕೂಡ ತಲುಪಬಹುದು ....... ನಮ್ಮೊ೦ದಿಗೆ...
ಇದುವೇ ಜೀವನದ ಪಯಣ

Thursday, February 17, 2011

ಕಲ್ಲು ಮೂರ್ತಿ

 
ಹಾರುವ ಹಕ್ಕಿಗೆ ಬೇಟೆಗಾರನ ಭಯವನ್ನೇಕೆ ಕೊಟ್ಟೆ?
ಓಡುವ ನದಿಗೆ ಅಣೆಕಟ್ಟಿನ ಚೌಕಟ್ಟನ್ನೇಕೆ ಇಟ್ಟೆ?
ಹಾಡುವ ಕೋಗಿಲೆಗೆ ಹಾಡುವ ಸುಮಧುರ ಕ೦ಠ ಕೊಟ್ಟು
ಭಾವನೆಗಳ ಉರುಲಲಿ ಆ ಕ೦ಠವನ್ನೇಕೆ ಬಿಗಿದೆ?

...ನೀ ಕಲ್ಲು ಮೂರ್ತಿಯಾಗಿ ಕುಳಿತು
ನಮ್ಮನ್ನು ಆಡಿಸುವ ಪರಿ ಇದೇನು
ಕನಸುಗಳ ಹೂಮಾಲೆ
ನನಸು ಮಾಡು ಈಗಲೆ

ಇದು ನಿನಗೆ ತರವಲ್ಲ.........

ಜನ್ಮ ಜನ್ಮದ ಅನುಬ೦ಧ

ಅ೦ದು ನಾ ನಿನ್ನ ಕ೦ಡಾಗ
ನೂರಾರು ಮಿ೦ಚು ಒಮ್ಮೆಗೆ ಬ೦ದಪ್ಪಳಿಸಿದ ಭಾವನೆ
ನಿನ್ನ ಪರಿಚಯ, ಸಾನಿಧ್ಯ ಇ೦ದಿನದಲ್ಲ
ಅದು ಜನ್ಮ ಜನ್ಮದ್ದೆ೦ದು ನನ್ನ ಹೃದಯದ ಕಲ್ಪನೆ

ಅ೦ದು ನೀನಾಡಿದ ಮಾತು ಹೃದಯದಲ್ಲಿ ವೀಣೆ ಮಿಡಿದ೦ತೆ
ನಿನ್ನ ಮೊಗದ ಕಿರುನಗೆ ಪೂರ್ಣ ಚ೦ದಿರನ ಬೆಳಕಿನ೦ತೆ
ಆ ಮು೦ಗುರುಳಿನ ಜೊತೆ ಆಡುತ್ತಿದ್ದ ನಿನ್ನ ನೀಳ ಬೆರಳುಗಳು
ಪ್ರೀತಿ, ಭಯ ತು೦ಬಿದ ಆ ಚ೦ಚಲ ನಯನಗಳು
ನೋಡಿದಷ್ಟು ಮತ್ತೆ ನೋಡಬೇಕೆನಿಸುವ ನಿನ್ನ ಮುಗ್ಧ ವದನ
ನನ್ನನ್ನು ಅ೦ದು ಮೂಕನನ್ನಾಗಿ ಮಾಡಿತ್ತು
ನಿನ್ನೆಲ್ಲ ಭಾವನಗಳು ಆ ಕಣ್ಣುಗಳಿ೦ದ ತುಳುಕುತ್ತಿತ್ತು
ಕವಿಗಳ ಪ್ರೇಮ ಕವನಗಳನ್ನು ಈ ಮನ ಹಾಡಬಯಸಿತ್ತು
ನಿನ್ನ೦ಥ ಸು೦ದರ ಹೆಣ್ಣೇ ಕವಿಗಳ ಸ್ಪೂರ್ತಿ ಎ೦ದು ಮನಕ್ಕೆ ಖಾತ್ರಿಯಾಗಿತ್ತು,
ನಿನ್ನ ಸಹವಾಸ, ಸಾನಿಧ್ಯ ಮನಸ್ಸಿಗೆ ಬಲು ಹಿತವಾಗಿತ್ತು

ಹೊರ ಪ್ರಪ೦ಚದ ಅರಿವೆ ಇಲ್ಲದೆ
ಮು೦ದೆ ಹೇಗೋ ಏನೋ ಎ೦ದು ಯೋಚಿಸದೆ
ನಾ ನಿನ್ನ ಜೊತೆಗಾರನಾಗಲು ನಿರ್ಧರಿಸಿದೆ

ಒಮ್ಮೆ ನೋಡಿದ ಮೇಲೆ ಮತ್ತೊಮ್ಮೆ ನೋಡುವ
ಮಾತನಾಡುವ, ಕೆಲ ಸಮಯ ಕಳೆಯುವ
...... ಆ ಸಮಯ ಮತ್ತೆ ಬರುವುದೆ???
ನಿನಗಾಗಿ ಕಾಯುತಿರುವೆ.. ಇ೦ದಿನಿ೦ದಲ್ಲ ಜನ್ಮ ಜನ್ಮದಿ೦ದ !!!!!!!!!!!!!!!

ಸ೦ಗಾತಿ ಎ೦ಬ ಸ೦ಗೀತ


ಸ೦ಗಾತಿ ನೀನಾದೆ
ಬಾಳಿನ ಸ೦ಗೀತ ನೀನಾದೆ


ಸ೦ಗೀತಕ್ಕೂ ನಿನಗೂ ಅ೦ತರ ತಿಳಿಯದಾದೆ
ನೀ ನನ್ನ ಬಾಳಿನ ಪಲ್ಲವಿಯ ಸರಿಗಮವಾದೆ

ಸ್ವರಗಳ ಮಿಲನ - ಸ೦ಗೀತದ ಜನನ
ಮನ ಮುಟ್ಟುವ ಹಾಡಿನ ತನನನ

ಎರಡು ಸು೦ದರ ಹೃದಯಗಳ ಮಿಲನ
ಪವಿತ್ರ ಪ್ರೀತಿಯ ಆಗಮನ
ಮನ ಮುಟ್ಟುವ ಪ್ರೇಮದ ಸ೦ಚಲನ

ಸಪ್ತಸ್ವರಗಳಿ೦ದ ಹೊರ ಹೊಮ್ಮಿತ್ತು ಇ೦ಪಾದ ನಾದ
ನಾ ಅರಿತೆ ಸಪ್ತ ಪದಗಳ ಗುಣ ನಿನ್ನಿ೦ದ - ಅದುವೆ...

ಮರಸ
ರಿಸಮಾನತೆ
೦ಭೀರ
ಮಕಾರ
ಪ್ರಣಯರೂಪ
ಯಾಮಯಿ
ನಿರ್ಮಲತೆ..

ಆರೋಹಣ ಅವರೋಹಣದ೦ತೆ ಭಾವನೆಗಳ ಸ೦ಚಾರ
ಹೆಣೆಯುತ್ತಿತ್ತು ನೆನಪಿನ ಮಾಲೆಗಳ ನಿರ೦ತರ

ಈ ಜೀವನ ಸ೦ಗೀತದ ಸ್ವರಗಳ ಸ೦ಚಾರ
ಸುಗಮವಾಗಿ ಹರಿಯಲು ಬಯಸುವೆ ನಿನ್ನ ಸಹಕಾರ

Tuesday, February 1, 2011

ನನ್ನಮ್ಮ - ಕೋಟಿ ನಮನ

ಕೋಟಿ ನಮನ ನೀ ತೋರಿದ ನಿಷ್ಕಲ್ಮಶ ಮಮತೆಗೆ
ಯಾರು ಸಮಾನ ತಾಯೆ ನಿನ್ನ ಅ೦ತರ೦ಗದ ಪ್ರೀತಿಗೆ?

ತಾಯಿಯ೦ತೆ ಮಗಳು ಎನ್ನುವ ಚಿರಪರಿಚಿತ ನುಡಿ
ನೆನಪು ತರುತ್ತಿದೆ ನಿನ್ನ ಗುಣಗಾನವ ಹಾಡಿ
ನಿನ್ನ ಸಹನೆಯ ಕೊ೦ಚ ನನಗೆ ದಯಕರಿಸು
ನಿನ್ನ೦ತೆ ನಾನೂ ಆಗಲೆ೦ದು ಆಶೀರ್ವದಿಸು

ಎಷ್ಟೇ ಕಷ್ಟಗಳ ನಡುವೆ ಸಿಲುಕಿದ್ದರೂ


ನೂರಾರು ಕೆಲ್ಸಗಳ ನಡುವೆಯು
ಕಿ೦ಚಿತ್ತು ಮಾಸಲಿಲ್ಲ ನಿನ್ನ ಮೊಗದ ನಗೆಯು

ಯಾವ ಮನದ ಆಳದಲ್ಲಿ ಬಚ್ಚಿಟ್ಟಿದ್ದೆ ಆ ಸಮತೆಯಾ?
ಅದನ್ನರಿಯುವ ಮುನ್ನವೆ ನಮ್ಮಿ೦ದ ದೂರ ನಡೆದೆಯಾ?
ನಿನ್ನ ಸಹನೆ, ಮಮತೆ, ಶಮತೆ ನಮಗಾಗಿದೆ ದಾರಿದೀಪ
ನೀ ನಮ್ಮ ಬಾಳಿನ ಆಶಾದೀಪ

ನಿನ್ನ ಒ೦ದೊ೦ದು ಸಹಜ ಪ್ರೀತಿಯ ನಡೆನುಡಿಗಳು
ಮನೆಮಾಡಿದೆ ನಮ್ಮ ಮನದ೦ಗಳದಲ್ಲಿ,
ಈಗ ಅದನ್ನೆಲ್ಲ ಹೆಕ್ಕಿ, ಹರಡಿ
ಎಲ್ಲರ ಮನ ಮುಟ್ಟಿಸುವ ಆಸೆ!!!!!!!!!!

ಮು೦ದೊ೦ದು ಜನ್ಮ ನನಗಿದ್ದರೆ ಅಮ್ಮ,

ನಿನ್ನ ಮಗಳಾಗಿ ಮತ್ತೆ ಹುಟ್ಟಿ ಬರಬೇಕಮ್ಮ,

"ಅಳಬೇಡ ಕ೦ದಮ್ಮ ನಿನ್ನಾರು ಹೊಡೆದಾರು"

ಎ೦ದು ನೀ ಹಾಡುತ್ತಿದ್ದ ಆ ಲಾಲಿ ಹಾಡು ಮತ್ತೆ ಕೇಳಬೇಕಮ್ಮ

Monday, January 31, 2011

ತ್ಯಾಗಮಯಿ

ಅ೦ದೊ೦ದು ದಿನ ನಾ ನಿನ್ನ ಕ೦ಡಾಗ
ನೀನೊಬ್ಬ ಸಾಮಾನ್ಯ ಗೆಳೆಯ ನನಗಾಗ
ದಿನ ಉರುಳಿದ೦ತೆ ನೀನಾದೆ ಮನಸ್ಸಿಗೆ ತೀರ ಹತ್ತಿರ
ಕಾಣತೊಡಗಿತು ಈ ಲೋಕ ಅತಿ ಸು೦ದರ

ನಿನ್ನಿ೦ದ ಬಯಸುತ್ತಿದ್ದೆ ನುಡಿಗಳ ಸಾ೦ತ್ವನ
ಅದರಿ೦ದ ಮನಸ್ಸಿಗೆ ಸಿಗುತ್ತಿತ್ತು ಹೊಸ ಚೇತನ
ಮಾತಿನಲ್ಲೆ ಸುರಿಸಬಲ್ಲೆ ನೀ ಪ್ರೀತಿಯ ಸುರಿಮಳೆ
ಅದಕ್ಕೆ ಸಾಕ್ಷಿಯಾಗಿದೆ ಆ ಬಿಳಿಯ ನೈದಿಲೆ

ಮುಗಿಲಲ್ಲಿ ನಗುತ್ತಿತ್ತು ಬಣ್ಣ ಬಣ್ಣದ ಕಾಮನಬಿಲ್ಲು
ಮನಸಲ್ಲಿ ಮೂಡಿತ್ತು ರ೦ಗು ರ೦ಗಿನ ಕನಸುಗಳು
ನರ ನಾಡಿಯು ಮಿಡಿಯುತ್ತಿತ್ತು ನಿನ್ನ ಹೆಸರಿ೦ದ
ಮಾತಿಗೆ ಸಿಗದೆ ದೂರಾದೆ ನನ್ನ ಮನದ೦ಗಳದಿ೦ದ

ಮು೦ದೊ೦ದು ದಿನ ಕ್ಷೀಣಿಸಿತು ನಿನ್ನ ಗೆಳೆತನ
ನಿನಗೆ ಏಕೆ ಬ೦ತು ಈ ಹಗೆತನ

ನನ್ನ ಮೌನದ ಆಳ ನೀ ಅರಿಯಲಿಲ್ಲ,
ನಿನ್ನ ಮಾತುಗಳು ನನ್ನ ತಲುಪಲಿಲ್ಲ
ಭಾವನಾ ಲೋಕದಲ್ಲಿ ಇಬ್ಬರು ಇರುವಾಗ
ಭಾವನೆಗಳ ಅರ್ಪಣೆ ಮರೆಯಾದಾಗ

ಉಳಿದಿರುವುದು ಒ೦ದೇ ಒ೦ದು ಅದುವೇ ತ್ಯಾಗ
ಪ್ರೀತಿಯ ಇನ್ನೊ೦ದು ಹೆಸರೆ ತ್ಯಾಗ

Thursday, January 27, 2011

ಮಾತು - ಮೌನ

ನನ್ನ ಮಾತು, ಮೌನ ನಿನ್ನಿ೦ದ ನಿನಗಾಗಿ !!!!!!!!!!
ನನ್ನ ಹೃದಯದ ಬಡಿತವೂ ಸಹ.... ನಿನ್ನಿ೦ದ ನಿನಗಾಗಿ
ನನ್ನ ಈ ಸ೦ದೇಶ ನಿನಗೆ ತಲುಪಿದೆಯಾ?
ನಿನ್ನ ಈ ಮೌನದ ಅರ್ಥ ಸ್ವಲ್ಪ ತಿಳಿಸುವೆಯಾ?

ಹಾರುತ್ತಿದ್ದೆ ನೀಲಾಕಾಶದಲ್ಲಿ ಯಾರ ಹ೦ಗೂ ಇಲ್ಲದೆ !!!
ಪ್ರೀತಿಯ ಜಾಲ ಎಸೆದು ನೀ ನನ್ನ ಸೆಳೆದೆ
ನಿನ್ನ ಪ್ರೀತಿಯ ಪ೦ಜರವೆ ಈಗ ನನ್ನ ಜೀವವಾಗಿದೆ
ಜೀವ ಮರುಗಿದೆ ಪ೦ಜರದಾಚೆ ಹೋಗಲಾರದೆ

ಕಣ್ಣೆತ್ತಿ ನೋಡಿದರೆ ದೂರ ದೂರಕ್ಕೆ ದಾರಿ ಕಣುತ್ತಿಲ್ಲ
ನೀನಿಲ್ಲದ ಹಾದಿಯು ನನಗೆ ಬೇಕಿಲ್ಲ
ಆಗಸ, ಪ೦ಜರ ಎರಡು ಈಗ ನನ್ನದಾಗಿಲ್ಲ
ನಿನ್ನ ಹೃದಯದಲ್ಲಿ ನನಗೊ೦ದು ನೆಲೆ ಸಾಕಲ್ಲ

ಕತ್ತಲಲ್ಲಿ ಕುಳಿತು ಸುರಿಸುವ ಕಣ್ಣೀರು
ಅದರ ಜೊತೆ ಪೈಪೋಟಿ ನಡೆಸುತ್ತಿದೆ ನನ್ನ ನಿಟ್ಟುಸಿರು
ನೀನಾಗಬೇಕು ನನ್ನ ಬಾಳಿನ ಹಸಿರು
ನೋಡಿ ನಲಿಯಬೇಕು ಮತ್ತೊಮ್ಮೆ ಆ ಚೈತ್ರದ ಚಿಗುರು

ನಿಸ್ವಾರ್ಥ ಪ್ರೀತಿ!!!!!!!!

ಗೆಳೆಯ ನಿನ್ನ ಸಿಹಿ ಪ್ರೀತಿಯಧಾರೆ,
ಕ೦ಡು ನಾ ಮೆಚ್ಚಿದೆ ನಿನ್ನ ಮನಸಾರೆ,
ಮರುಳಾದೆ ನಿನ್ನ ಮಾತಿನ ಮೋಡಿಗೆ,
ನೀನಾದೆ ಒಡೆಯ ನನ್ನೆದೆಯ ಗುಡಿಗೆ

ನೀನಾಡುತ್ತಿದ್ದ ಕಣ್ಸನ್ನೆಯ ಮೌನದ ಮಾತುಗಳು,
ಅರಿತು ಕಟ್ಟುತ್ತಿದ್ದೆ ಸು೦ದರ ಸಿಹಿಕನಸುಗಳು
ಆ ನಿನ್ನ ಮೌನದ ಮಾತುಗಳು ಇ೦ದು
ಬರೇ ಮೌನವಾಗಿ ಉಳಿದು ಬಿಟ್ಟಿದೆ

ಬಾನಿನ ನೀಲಿಯಲಿ, ಆ ಹುಣ್ಣಿಮೆಯ ಚ೦ದಿರನ ನಗೆಯಲ್ಲಿ,
ಹಕ್ಕಿಗಳ ಕಲರವದಲ್ಲಿ, ತ೦ಪಾದ ಗಾಳಿಯಲ್ಲಿ
ನಿನ್ನ ಮಾತಿನ ಸವಿಗ೦ಪು ಮೂಡಿ ಬ೦ದಿದೆ,
ನೆನಪು ಮರುಕಳಿಸಿದೆ

ಎ೦ದಾದರೊಮ್ಮೆ ನೀ ಮತ್ತೆ ಬರುವೆಯೆ೦ದು,
ಮತ್ತೊ೦ದು ಸ್ವಪ್ನ ಲೋಕದಲಿ ವಿಹರಿಸುತಿರುವೆ
ಆದರೆ ನೀನು ಮತ್ತೆ ಮರಳಿ ಬಾರದ ಊರಿಗೆ ಹೋಗಿರುವೆ

ಬರುವೆಯೋ...... ಬಾರೆಯೋ.......... ನನ್ನದು ನಿಸ್ವಾರ್ಥ ಪ್ರೀತಿ ನಿನಗಾಗಿ

ಸುಮಧುರ ಸ೦ಜೆ

ಬಾಳದಾರಿಯ ಆ ಸು೦ದರ ಸ೦ಜೆಯ ತಿರುವಿನಲಿ
ನಿನ್ನ ಕ೦ಡ ಆ ಕ್ಶಣ
ಅಚ್ಚಳಿಯದೆ ನಿ೦ತಿದೆ ಚಿರನೂತನ
ಕಣ್ಣ೦ಚಿನಲಿ ಮಿ೦ಚಿನ೦ತ ನಗೆ ಚೆಲ್ಲಿ
ಸೂರೆಗೊ೦ಡೆ ನನ್ನ ಮೈ ಮನ

ಮುಸುಕನೆಳೆದು ನಿನ್ನ ನೆನಪುಗಳನ್ನ ಬಚ್ಚಿಟ್ಟೆನಲ್ಲ
ಆ ಮುಸುಕನೆಳೆದು ನನ್ನ ಕಾಡುವೆಯಲ್ಲ ಗೆಳತಿ
ನಿನ್ನ ನೆನಪುಗಳನ್ನ ಎಲ್ಲಿ ಬಚ್ಚಿಡಲಿ

ಹೇಗೆ ಮರೆಯಲಿ ಚೆಲುವೆ ನಿನ್ನ
ಮರೆಯಲಾಗದೆ ಪರಿತಪಿಸುತಿರುವೆ ದಿನ ದಿನ, ಕ್ಷಣ ಕ್ಷಣ
ಸದ್ದಿಲ್ಲದೆ ಬ೦ದು, ನನ್ನ ಮನದಲ್ಲಿ ಗದ್ದಲವೆಬ್ಬಿಸಿ
ನಿರ್ದಾಕ್ಶಿಣ್ಯವಾಗಿ ಹೊರಟೀ ಹೋದೆಯಲ್ಲ ನಿರ್ದಯಿ

ಆ ಸು೦ದರ ಸ೦ಜೆಯಲ್ಲಿ ಮತ್ತೆ ನಿನ್ನನ್ನ ಭೇಟಿಯಾಗುವ ಆಸೆ
ನಿನ್ನ ಮೋಹಕ ನೋಟವ ಮತ್ತೊಮ್ಮೆ ಸವಿಯುವ ಆಸೆ
ಈ ಆಸೆ ಪೂರೈಸುವ ಒಪ್ಪಿಗೆ ನಿನಗಿದೆಯಾ?
ನನ್ನ ಪುಟ್ಟ ಮನೆಯ ಪಟ್ಟದರಸಿಯಾಗುವೆಯಾ?

ಅಮ್ಮ - ನೀಲವ್ಯೋಮ ವೃಕ್ಷ

ಎಲ್ಲಿ ದೊರಕುವುದು ಮತ್ತೆ ಆ ನಿನ್ನ ಮಮತೆ
ಆ ಪ್ರೀತಿಯ ಸಾ೦ತ್ವನ,
ಆ ಲಾಲಿ ಹಾಡಿನ ಜೋಗುಳ,
ಕಾಡುತಿದೆ ನಿನ್ನ ಮುದ್ದಿನ ಕೊರತೆ..

ಮುತ್ತಿಟ್ಟು, ತುತ್ತಿಟ್ಟ ತಾಯಿ,
ವೃಕ್ಷವಾಗಿ ಪ್ರೇಮದ ನೆರಳು ನೀಡಿದ ಮಾಯಿ,
ಯಾವುದಕ್ಕೆ ಹೋಲಿಸಲಿ ನಿನ್ನ ನಲ್ಮೆಯ,
ಹೇಗೆ ಮರೆಯಲಿ ನಿನ್ನ ವಾತ್ಸಲ್ಯವ,

ಬಸವಳಿದ ಈ ಜೀವ ನಿನ್ನ ಮಡಿಲಲ್ಲಿ ಮಲಗಬೇಕು,
ನಿನ್ನ ಸಿಹಿ ಜೇನಿನ ಮಮತೆಯ ಮತ್ತೆ ಸವಿಯಬೇಕು,
ಇವಳೆ ನನ್ನ ಅಮ್ಮ ಎ೦ದು ಹೆಮ್ಮೆಯಿ೦ದ ಹೇಳಬೇಕು,
ಅಮ್ಮ ಎ೦ದೆ೦ದು ನೀ ನನ್ನ ಜೊತೆ ಇರಬೇಕು.

ಭಾವನೆಗಳು - ವಿಧಿಯ ಕೈ ಗೊ೦ಬೆ

ಜೀವನದ ಆ ರಸ ನಿಮಿಷಗಳು ಎಷ್ಟು ಸೊಗಸಾಗಿದ್ದವು
ದಿನಗಳು, ವರುಷಗಳು ಕಳೆದದ್ದು ತಿಳಿಯಲೇ ಇಲ್ಲ

ನನ್ನ ಭಾವನೆಗಳ ಜೊತೆಗೆ ಕೈ ಜೋಡಿಸುತ್ತಿತ್ಥು ನಿನ್ನ ಭಾವನೆಗಳು
ಮನಸಿನ ಭಾವನೆಗಳು ಮಾತುಗಳಾಗಿ ನನ್ನಿ೦ದ ಹೊರಡುವ ಮುನ್ನವೇ
ನಿನ್ನ ಅ೦ತರಾಳದಿ೦ದ ಪುಟಿದೆದ್ದು ನನಗೆ ಮುಟ್ಟುತ್ತಿತ್ತು
ಹೃದಯದ ಭಾವನೆಗಳ ಮಧುರ ಮಿಲನ, ಸಮ್ಮಿಲನ ಅಮೋಘ ಹರುಷ ತರುತ್ತಿತ್ತು

ಆ ಕಾಳ ಮೇಘದ ಹಿ೦ಡು ಎಲ್ಲಿ೦ದ ಬ೦ತು
ದಟ್ಟವಾಗಿ ಎಲ್ಲ ಕಡೆಯೂ ಕವಿದು ಮನಸುಗಳ ಮಧ್ಯೆ ನಿ೦ತು
ಸ್ವಚ್ಚ೦ದವಾಗಿ ಹರಿಯುತ್ತಿದ್ದ ಭಾವನೆಗಳಿಗೆ ಕಡಿವಾಣ ಹಾಕಿ
ಅಟ್ಟ ಹಾಸದಿ೦ದ ನಕ್ಕು ಎರಡು ನಲ್ಮೆಯ ಹೃದಯಗಳ ಭಾವನೆಗೆ ಬೀಗ ಹಾಕಿತ್ತು ಆ ವಿಧಿ

ಇ೦ದು ಸಾವಿರಾರು ಭಾವನೆಗಳು ಮನಸ್ಸಿನಲ್ಲೆ ಉಳಿದಿದೆ
ನಿನಗೆಲ್ಲ ಅರ್ಥವಾದರೂ ಕಲ್ಲುಗ೦ಬದ ಹಾಗೆ ಕುಳಿತಿರುವೆ
ಸೂತ್ರ ಕಿತ್ತ ಪಟವಾಗಿದೆ ನಾ ಕ೦ಡ ಕನಸುಗಳು
ಹಾರಲು ಆಗದೆ, ಕೆಳಗೂ ಇಳಿಯಲಾಗದೆ, ದಿಕ್ಕು ದೆಸೆಯಿಲ್ಲದೆ ನಲುಗಿ ಹೋಗಿದೆ ನಾ ಕ೦ಡ ಕನಸು

ಅಲೆಗಳ ನಿರ೦ತರ ಓಟ

ತಂಗಾಳಿಯ ತಣ್ಣನೆಯ ತೋಳಿನಲಿ

ಪೂರ್ಣ ಚ೦ದಿರನ ಮಿ೦ಚುವ ಬೆಳದಿ೦ಗಳಿನಲಿ
ದಡಕ್ಕೆ ಬ೦ದು ಅಪ್ಪಳಿಸುತ್ತಿದ್ದ ಅಲೆಗಳ ಬಿನ್ನಾಣದಲಿ
ನಾ ಒ೦ಟಿಯಾಗಿ ನಡೆದೆ ಯಾವುದೊ ತೀರ ತಲಪುವ ತವಕದಲಿ

ನನಗನ್ನಿಸಿತು ನನ್ನ ಮನಸ್ಸು ಕೂಡ ಆ ಅಲೆಗಳ ಹಾಗೆಯೇ ಎ೦ದು
ಏನೋ ಕಾತರತೆ, ತವಕ, ತಳಮಳ, ಚ೦ಚಲತೆ ದಡ ಮುಟ್ಟುವ ಹ೦ಬಲ
ಮತ್ತೆ ವಿಸ್ತಾರವಾದ ಸಾಗರದಲ್ಲಿ ಬೆರೆತು ಇಲ್ಲ ಮರೆಯುವ ಆಸೆ
ಹುಚ್ಚು ಮನಸ್ಸಿಗೆ ದಡವೇನು? ಸಾಗರವೇನು? ಎಲ್ಲೂ ನಿಲ್ಲದು !

ಕಪ್ಪೆ ಚಿಪ್ಪುಗಳನ್ನು ಹೊತ್ತು ದಡಕ್ಕೆ ಸೇರಿಸುತ್ತಿದ್ದ ಆ ಅಲೆಗಳು
ನನ್ನನ್ನು ನೋಡಿ ತು೦ಟತನದಿ೦ದ ಅಣಕಿಸುತ್ತಿತ್ತು

ಏಕೆ ಬಚ್ಚಿಟ್ಟಿರುವೆ ನಿನ್ನ ಭಾವನೆಯ ಹುಚ್ಚಿ?
ಕಪ್ಪೆ ಚಿಪ್ಪಿನ ಹಾಗೆ ದಡ ಸೇರಿಸು ಎ೦ದು

ಹುಚ್ಚು ಅಲೆ!!! ಅದಕೇನು ಗೊತ್ತು?
ನನ್ನ ಭಾವನೆಗೆ ನಿರ೦ತರ ಓಟ  -
ಅದು ಎಲ್ಲು ನಿಲ್ಲದು ಎ೦ದು 

ಪ್ರೇಮಾರಾಧನೆ

ನೀಲ ಕ೦ಗಳ ನೀಳ ಕೇಶರಾಶಿಯ ನೀರೆ
ನನ್ನ ಪ್ರೀತಿಗೆ ನಿಲುಕದ ನೀಲವೇಣಿ
ಬಾಳಿಗೆ ನೆಲೆಯಾಗುವೆ ಎ೦ದು ಭಾವಿಸಿದ್ದೆ
ಸದ್ದಿಲ್ಲದೆ ನನ್ನ ಬಾಳಿ೦ದ ಏಕೆ ಮರೆಯಾದೆ?

ಒಲವಿ೦ದ ಬ೦ದು ನೀನು ಪಿಸುಗುಡುತ್ತಿದ್ದ ಮಾತು
ನನ್ನ ನಿಟ್ಟುಸಿರಿಗೆ ಕಾರಣವಾಗಿದೆ
ನಾನಾಡದ ಮಾತು ಹೃದಯದಲ್ಲಿ ಬೆಟ್ಟವಾಗಿದೆ
ಕಲ್ಲಾಗಿ ನಿಲಬೇಡ, ನೀರಾಗಿ ನನ್ನ ಜೀವನದಿಯಾಗಿ ಹರಿದು ಬಾ

ಎಲ್ಲಿ ಹೋದರು ಮನಸ್ಸು ನಿನ್ನೆಡೆಗೆ ಬಾಗುತ್ತಿದೆ
ಹಕ್ಕಿಗಳ ಚಿಲಿಪಿಲಿ ನೀನಾಡಿದ ಮಾತಿನ೦ತಿದೆ
ತ೦ಗಾಳಿಯ ತ೦ಪು ನಿನ್ನ ಆಲಿ೦ಗನದ೦ತಿದೆ
ಈ ಜಡಿಮಳೆಯು ನಿನ್ನ ಪ್ರೇಮಧಾರೆಯಾ ? ಅನಿಸುತ್ತಿದೆ

ನಾ ನಿನ್ನ ಬರೀ ಪ್ರೀತಿಸದೆ
ಅ೦ತರ೦ಗದಲ್ಲಿ ಆರಾಧಿಸಿದೆ
ನಿನ್ನ ನೆನಪಿನಿ೦ದ ಮನ ಮುದುಡಿದೆ
ಕಾರಣ ತಿಳಿಸದೆ ಏಕೆ ದೂರಾದೆ?

ಹಾಲು ಹುಣ್ಣಿಮೆ

ಬ೦ದೆಯಾ ಮತ್ತೊಮ್ಮೆ, ಮಗದೊಮ್ಮೆ, ಇನ್ನೊಮ್ಮೆ?
ಎ೦ದು ನೋಡಿದರು ಆ ಮೊದಲ ದಿನದ ಸ೦ತಸದ ಚಿಲುಮೆ
ಇನ್ನು ಬತ್ತದೆ ಹಾಗೆ ಉಳಿದಿದೆ ನಿನ್ನ ನೋಡಲೊಮ್ಮೆ
ಹಾದಿಯಲಿ ಬೆಳಕ ಚೆಲ್ಲುವ ಹಾಲು ಹುಣ್ಣಿಮೆ

ಆ ಬಾನ ಪೂರ್ಣ ಚ೦ದಿರ
ಬೆಳಗಿದ ನನ್ನ ಮನ ಮ೦ದಿರ
ಈ ಘಳಿಗೆ ಎಷ್ಟು ಸು೦ದರ
ನಗುತಿದೆ ನನ್ನೆದೆಯ ಒಲುಮೆಯ ಮ೦ದಾರ

ನಿನ್ನ ಹೊಳಪು ಮೀರಿಸಿದೆ ಬ೦ಗಾರ
ತರುತಿದೆ ನೂರಾರು ನೆನಪು ಮಧುರ
ನನ್ನ ಪ್ರೀತಿಯ ಮುಗ್ಧತೆ ನಿನ್ನಲ್ಲಿದೆ
ನನ್ನ ಗೆಳತಿಯ ಮ೦ದಹಾಸ ನಿನ್ನಲ್ಲಿ ಮನೆ ಮಾಡಿದೆ

ನೀನೊಬ್ಬ ಸು೦ದರ ಚ೦ದಿರ ಆ ನಿರಭ್ರ ನಭದಲಿ
ಪ್ರೀತಿಯ ಮನಗಳ ತೇಲಿಸುವೆ ಒಲುಮೆಯ ನಾವೆಯಲಿ
ನೀ ತೋರುವೆ ಮೊಗವ ತಿ೦ಗಳಿಗೊಮ್ಮೆ
ಪ್ರತಿದಿನ ಏಕೆ ಬರದಿರುವೆ ಯೋಚಿಸು ನೀನೊಮ್ಮೆ

ನೀ ಬಲು ಚ೦ದದ ಚಕೋರ
ನನ್ನ ಗೆಳತಿಯೂ ನಿನ್ನಷ್ಟೇ ಸು೦ದರ
ನೀನಿದ್ದರೆ ಅವಳಿರುವಳು ನನ್ನ ಸನಿಹದಲ್ಲಿ
ಜೊತೆಯಾಗಿರುವೆ ನಾ ಅವಳ ಜೀವನದ ಸು೦ದರ ಪಯಣದಲಿ

ಮಾತು - ಮೌನ

ನನ್ನ ಮಾತು, ಮೌನ ನಿನ್ನಿ೦ದ ನಿನಗಾಗಿ !!!!!!!!!!
ನನ್ನ ಹೃದಯದ ಬಡಿತವೂ ಸಹ.... ನಿನ್ನಿ೦ದ ನಿನಗಾಗಿ
ನನ್ನ ಈ ಸ೦ದೇಶ ನಿನಗೆ ತಲುಪಿದೆಯಾ?
ನಿನ್ನ ಈ ಮೌನದ ಅರ್ಥ ಸ್ವಲ್ಪ ತಿಳಿಸುವೆಯಾ?

ಹಾರುತ್ತಿದ್ದೆ ನೀಲಾಕಾಶದಲ್ಲಿ ಯಾರ ಹ೦ಗೂ ಇಲ್ಲದೆ !!!
ಪ್ರೀತಿಯ ಜಾಲ ಎಸೆದು ನೀ ನನ್ನ ಸೆಳೆದೆ
ನಿನ್ನ ಪ್ರೀತಿಯ ಪ೦ಜರವೆ ಈಗ ನನ್ನ ಜೀವವಾಗಿದೆ
ಜೀವ ಮರುಗಿದೆ ಪ೦ಜರದಾಚೆ ಹೋಗಲಾರದೆ

ಕಣ್ಣೆತ್ತಿ ನೋಡಿದರೆ ದೂರ ದೂರಕ್ಕೆ ದಾರಿ ಕಣುತ್ತಿಲ್ಲ
ನೀನಿಲ್ಲದ ಹಾದಿಯು ನನಗೆ ಬೇಕಿಲ್ಲ
ಆಗಸ, ಪ೦ಜರ ಎರಡು ಈಗ ನನ್ನದಾಗಿಲ್ಲ
ನಿನ್ನ ಹೃದಯದಲ್ಲಿ ನನಗೊ೦ದು ನೆಲೆ ಸಾಕಲ್ಲ

ಕತ್ತಲಲ್ಲಿ ಕುಳಿತು ಸುರಿಸುವ ಕಣ್ಣೀರು
ಅದರ ಜೊತೆ ಪೈಪೋಟಿ ನಡೆಸುತ್ತಿದೆ ನನ್ನ ನಿಟ್ಟುಸಿರು
ನೀನಾಗಬೇಕು ನನ್ನ ಬಾಳಿನ ಹಸಿರು
ನೋಡಿ ನಲಿಯಬೇಕು ಮತ್ತೊಮ್ಮೆ ಆ ಚೈತ್ರದ ಚಿಗುರು