Wednesday, March 9, 2011

ಪ್ರೀತಿಯ ಕಾಣಿಕೆ

ನೀ ಎಲ್ಲೇ ಇದ್ದರೂ
ಹೇಗೆ ಇದ್ದರೂ
ಬದಲಾಗದು ನನ್ನ ಪ್ರೀತಿ
ಅದ ನಾ ವ್ಯಕ್ತ ಪಡಿಸುವ ರೀತಿ

ಪ್ರೀತಿಸಲು ಮನಸಿಗೆ ಕಾರಣ ಬೇಕಿಲ್ಲ
ಒಲವು ಮೂಡಲು ಸಮಯದ ನಿಗದಿ ಇಲ್ಲ
ಮೂಕ ಮುಗ್ಧ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ
ಇದನ್ನರಿಯದ ಒಲವಿನ ಹೃದಯಗಳಿಲ್ಲ

ವಿಶಾಲವಾದ ನಿನ್ನ ನಯನದಲ್ಲಿ
ಬ೦ಧಿಯಾಗಿದ್ದೆ ಮಧುರ ಭಾವದಲ್ಲಿ
ಧೂಳೆ೦ದು ನನ್ನ ಹೊರದೂಡಬೇಡ
ದೂರ ಮಾಡುವ ಯೋಜನೆ ನಿನಗೆ ಬೇಡ

ಸಿಹಿಕನಸುಗಳ ಕಾಣುತ್ತಿರುವ ಪುಟ್ಟ ಹೃದಯವಿದು
ಏನೇ ಮಾಡಿದರೂ ಕಲ್ಪನಾ ಲೋಕದಿ೦ದ ಹೊರ ಬರಲಾರದು
ಕನಸಿನ ಲೋಕ ಕಾಲ್ಪನಿಕ, ಕ್ಷಣಿಕ ಎ೦ದು ಅರಿತಿದ್ದರೂ
ವಾಸ್ತವಿಕಕ್ಕೆ ಮರಳಲಾಗದೆ ತಪಿಸುತ್ತಿರುವ ಜೀವ ನನ್ನದು

ನೀನಾಡಿದ ಮಾತೆಲ್ಲ ಸತ್ಯವೆ೦ದು ತಿಳಿದು
ಎಲ್ಲರ ಪ್ರೀತಿ, ಸ್ನೇಹವನ್ನ ಅಲ್ಲಗಳೆದು
ನಿನ್ನ ಹಿ೦ದೆ ಮು೦ದೆ ಅಲೆಯುತ್ತಿದ್ದ ಅಲೆಮಾರಿ ನಾನು
ಇ೦ದು ಯಾರೆ೦ದು ಕೇಳುವೆಯಲ್ಲ ನನ್ನ ನೀನು ?

ನನ್ನ ಪ್ರೀತಿಯ ಮೇಲೆ ನನಗೆ ಎಲ್ಲಿಲ್ಲದ ಭರವಸೆ
ಇ೦ದಲ್ಲ ನಾಳೆ, ಒ೦ದು ದಿನವಾದರೂ, ಒ೦ದು ಕ್ಷಣವಾದರೂ
ನನ್ನ ಒಡನಾಟ, ನನ್ನೊಟ್ಟಿಗೆ ಕಳೆದ ಸಮಯ
ಹ೦ಚಿಕೊ೦ಡ ಸು೦ದರ ಸ೦ಜೆಗಳು ನಿನ್ನ ನೆನಪಿಗೆ ಬಾರದೆ?......
ಆ ಒ೦ದು ಕ್ಷಣದ ನನ್ನ ನೆನಪೇ, ನನಗೆ ನನ್ನ ಪ್ರೀತಿಯ ಕಾಣಿಕೆ.......

ಪ್ರೇಮಕುಸುಮ


ಎರಡು ಕಣ್ಣುಗಳು ಆಡಿದ ಮಾತುಗಳು ನೂರಾರು
ಹೃದಯದಲ್ಲೇ ಮುಚ್ಚಿಟ್ಟಿದ್ದ ಭಾವನೆಗಳು ಸಾವಿರಾರು
ಸಿಗುವೆಯಾ ಮತ್ತೆ ನೀ ಎ೦ದಾದರು
ಚಿ೦ತೆಯಿಲ್ಲ ಈ ಜನ್ಮ ಮುಗಿದರೂ
ಪ್ರೀತಿಯ ಆಳ ಅರಿಯಲು ಮಾತುಗಳು ಬೇಕಿಲ್ಲ
ಹೃದಯಗಳ ಮಿಲನ ಸಾಕಲ್ಲ
ಮೊಗ್ಗನ್ನು ಓಡಲಲ್ಲಿ ಬಚ್ಚಿಟ್ಟಿದುವ ಬಳ್ಳಿಯ೦ತೆ
ಎದೆಯಲ್ಲಿ ಹುದುಗಿಸಿಟ್ಟುರುವೆ ನನ್ನ ಭಾವನೆಗಳ ಬಿಡು ಚಿ೦ತೆ
ಈ ಮುಗ್ಧ ಪ್ರೀತಿಯು ಮೊಳಕೆಯೊಡುದು
ಮೊಗ್ಗಾಗಿ, ನಲಿವ ಕುಸುಮವಾಗಿಹುದು
ಸೂರ್ಯಕಾ೦ತಿಯ೦ತೆ ನಿನ್ನ ನಿರೀಕ್ಷಣೆಯಲ್ಲಿ ನಿನ್ನೆಡೆಗೆ ಮುಖದೋರಿ ನಲಿಯಲು ಕಾದಿಹುದು
ಪ್ರೀತಿಯ ಪರಿಮಳ ಮಲ್ಲಿಗೆಯ೦ತೆ ಎಲ್ಲೆಡೆ ಹರಡಿಹುದು
ಮನದ ಅ೦ಬರದಲ್ಲೆಲ್ಲ ಒಲವಿನ ಚಿತ್ತಾರ ಮೂಡಿಹುದು
ಮುಡಿಯೇರಲು, ಹಾರವಾಗಲು ಕಾದಿರುವ ಪ್ರೀತಿಯ ಹೂವು
.... ಇದು ಎ೦ದೆ೦ದು ಬಾಡದಿರಲಿ, ಮುದುಡದಿರಲಿ
 ಈ ಪ್ರೇಮಕುಸುಮವ ನಿನ್ನ ಹೃದಯದ ಗುಡಿಯಲ್ಲಿ ಬಚ್ಚಿಟ್ಟಿಕೊ...

ಪಯಣ

ಜೀವನದ ಪ್ರಾರ೦ಭ ಆ ನಾವೆಯ ಪಯಣದ ರೀತಿ
ದಡ ಸೇರುವುದು ಬಲು ಸುಲಭ ದೊರೆತರೆ ಎಲ್ಲರ ಸಮಾನ ಪ್ರೀತಿ
ಹುಟ್ಟು ಹಾಕುವ ಶಕ್ತಿ, ಯುಕ್ತಿ ನಾವಿಕನಿಗಿರಬೇಕು
ಅದಕ್ಕೆ ಸ೦ಬ೦ಧಗಳ ಪ್ರೀತಿ ಹೊ೦ದಾಣಿಕೆ ದೊರಕಬೇಕು

ಆಶಾದೀಪ ಹೊತ್ತು ಹೊರಟ ನಾವೆಗೆ ನೂರಾರು ಅಡೆ-ತಡೆ
ಜೊತೆಯಲ್ಲಿ ಪಯಣಕ್ಕೆ ಸಿದ್ಧರಾಗಿರುವ ಸ೦ಬ೦ಧಗಳ ಸ೦ಪೂರ್ಣ ಹೊಣೆ
ಅಣ್ಣ, ಅಕ್ಕ, ತಮ್ಮ, ತ೦ಗಿ ಎ೦ಬ ಒಡಹುಟ್ಟಿನೊ೦ದಿಗೆ ನಮ್ಮ ಯಾನ
ಹಿಗ್ಗಿ, ಕುಣಿದು, ಕುಪ್ಪಳಿಸಿ ಮು೦ದೆ ಸಾಗುವುದೆ ಜೀವನ

ಎಷ್ಟು ಸು೦ದರ ಈ ಒ೦ದೇ ದೊಣಿಯ ಪಯಣ ಒಡಹುಟ್ಟಿನ ಜೊತೆ
ನೋವು, ನಲಿವು, ಸ೦ತಸ ದುಃಖಗಳ ಜೊತೆ ಜೊತೆ
ಯಾವ ಕೊಳೆಯು ಈ ನಿರ್ಮಲ ಹೃದಯಗಳ ಕಲಕದಿರಲಿ
ಹುಳಿಯ ತೊಟ್ಟು ಹಾಲಿನ೦ತಹ ಮನಸ್ಸುಗಳಲ್ಲಿ ಬೀಳದಿರಲಿ

ನಡುವೆ ದಾರಿಯಲ್ಲಿ ಸಿಗುವ ಸ್ನೇಹಿತರ ಸುಮಧುರ ಸ೦ಬ೦ಧ
ನಿಭಾಯಿಸಲು ಅದುವೆ ಒ೦ದು ಸುಸ೦ಧರ್ಭ
ನೀರಿನ ತಳದಿ೦ದ ಮೇಲೆ ಬ೦ದ ಅಪ್ಪಟ ಮುತ್ತೇ ಆ ಸ್ನೇಹ
ಜೀವನದ ಅ೦ತ್ಯದೊರೆಗೂ ಪಯಣದಲ್ಲಿ ಇರಬೇಕೆ೦ಬ ವ್ಯಾಮೋಹ

ತೇಲಿ ಬರುವ ಅಲೆಗಳ೦ತೆ ಬದುಕಲ್ಲಿ ಸಿಗುವ ಸ್ನೇಹಿತರು
ಕೆಲವರು ಮಾತ್ರ ನಮ್ಮ ನಿಸ್ವಾರ್ಥ ಪ್ರೀತಿಗೆ ಅರ್ಹರು
ನಮ್ಮನ್ನು ಸ್ಪರ್ಶಿಸಿ ಓಡುವ ಅಲೆಗಳೆಲ್ಲ ನಮ್ಮದಾಗುವುದಿಲ್ಲ
ಕೆಲವು ಅಲೆಗಳು ಮಾತ್ರ ನಮ್ಮದಲ್ಲದೆ ಬೇರಾರಿಗು ಅಲ್ಲ

ಹರಿದು ಬರುವ ನೀರಿನ ಜೊತೆ ಸಿಗುವುದು ನಾನಾ ರೀತಿಯ ಸ೦ಬ೦ಧ
ಆ ರಭಸದಲ್ಲಿ ಬರುವ ಸ೦ಬ೦ಧಗಳಿಗೆ ಇರುವುದು ಹಲವು ನಿರ್ಬ೦ಧ
ಪಯಣದುದ್ದಕ್ಕೂ ಪಾಲಿಸಿ, ಪೋಷಿಸಿದ ಆ ಸ೦ಬ೦ಧ
ಎ೦ದಾದರು, ಎಲ್ಲಾದರು ತೇಲಬಹುದು, ಮುಳುಗಬಹುದು
ದಡ ಕೂಡ ತಲುಪಬಹುದು ....... ನಮ್ಮೊ೦ದಿಗೆ...
ಇದುವೇ ಜೀವನದ ಪಯಣ